Pages

Wednesday, 17 February 2010

ಗೂಗಲ್‌ನಲ್ಲೇನೋ ‘ಬಝ್’ಗುಡುತ್ತಿದೆ..... ???

ಮೊನ್ನೆ ಮೊನ್ನೆ ತಮ್ಮ ಜಿ-ಮೇಲ್ ಖಾತೆ ತೆರೆದು ಒಳಗೆ ಪ್ರವೇಶಿಸಿದವರಿಗೆ ಆಶ್ಚರ್ಯ ಕಾದಿತ್ತು. ‘ಬಝ್’ (Buzz) ಎನ್ನುವ ಹೊಸ ಸೇವೆಯೊಂದು ಇನ್‌ಬಾಕ್ಸ್‌ನ ಕೆಳಗಡೆ ಕುಳಿತು ಒಂದೇ ಸಮನೆ ಬಝ್ ಗುಡುತ್ತಿತ್ತು. ಏನಿದು ಬಝ್ ಅಂತೀರಾ? ಅದೇ, ಟ್ವಿಟರ್, ಫೇಸ್‌ಬುಕ್ ಇದೆಯಲ್ಲಾ? ಥೇಟ್ ಅಂತದ್ದೇ. ಸಂಕ್ಷಿಪ್ತ ಸಂದೇಶ ಅಭಿವ್ಯಕ್ತಿ.

ಕ್ಷಣ ಕ್ಷಣದ ಆಲೋಚನೆಗಳನ್ನು ಬರೆದು ಜಗಜ್ಜಾಹೀರು ಮಾಡುವ ಜಾಗ. ಗುಂಡಿಗೆ ಗಟ್ಟಿ ಇದ್ದರೆ ಯಾರು ಬೇಕಾದರೂ ‘ಬಝ್’ನಲ್ಲಿ ಏನು ಬೇಕಾದರೂ ಬರೆದು ಬಯಲು ಮಾಡಬಹುದು.

‘ಬಝ್’ ಬಳಸಲು ಹೊಸ ಖಾತೆ ತೆರೆಯಬೇಕಾಗಿಲ್ಲ. ನೋಂದಾಯಿಸಿಕೊಳ್ಳುವುದೂ ಬೇಡ. ನಿಮಗೊಂದು ಜಿಮೇಲ್ ಖಾತೆ ಇದ್ದರೆ ಸಾಕು. ‘ಬಝ್’ ತಾನಾಗಿಯೇ ಪರಿಷ್ಕೃತಗೊಂಡಿರುತ್ತದೆ. ಈಗಾಗಲೇ ನಿಮ್ಮ ಇಮೇಲ್ ಪಟ್ಟಿಯಲ್ಲಿರುವ ಜಿಮೇಲ್ ಬಳಕೆದಾರರೆಲ್ಲ ‘ಬಝ್’ನಲ್ಲಿ ನಿಮ್ಮ ಹಿಂಬಾಲಕರಾಗಿರುತ್ತಾರೆ. ಅಥವಾ ನೀವೇ ಅವರ ಹಿಂಬಾಲಕರಾಗಬಹುದು. ನಂತರ ನಿಮ್ಮ ತಲೆಯಲ್ಲಿ ಹುಟ್ಟುವ ಅಸಾಧಾರಣ ಆಲೋಚನೆಗಳನ್ನು ಇಲ್ಲಿ ಬರೆಯುತ್ತಾ ಹೋಗಬಹುದು. ಬರೆಯುವುದು ಬೇಸರವಾದರೆ ಚಿತ್ರ, ದೃಶ್ಯ ತುಣುಕುಗಳನ್ನು ಸೇರಿಸಬಹುದು. ಆದೂ ಬೇಸರವಾದರೆ, ನಿಮ್ಮ ಸ್ನೇಹಿತರು, ಅವರ ಸ್ನೇಹಿತರು ಈಗಾಗಲೇ ‘ಬಝ್’ನಲ್ಲಿ ಏನೇನು ಬರೆದುಕೊಳ್ಳುತ್ತಿದ್ದಾರೆ, ಯಾರು ಯಾರ ಕಾಲೆಳೆಯುತ್ತಿದ್ದಾರೆ ಎನ್ನುವುದನ್ನು ನೋಡಿ ಖುಷಿಪಡಬಹುದು. ಇಂತಹ ‘ಬಝ್’ಗೆ ಅಮೆರಿಕದ ಮೌಂಟೇನ್‌ವ್ಯೆನಲ್ಲಿರುವ ಗೂಗಲ್ ಕಚೇರಿಯಲ್ಲಿ ಕಳೆದ ವಾರ ಚಾಲನೆ ನೀಡಲಾಗಿದೆ.

ಗೂಗಲ್ ಬಝ್ ಸೇವೆಯನ್ನು ಪ್ರಾರಂಭಿಸಿದ ಮುಖ್ಯ ಉದ್ದೇಶ ಫೇಸ್ ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ವೆಬ್ ತಾಣಗಳ ಪ್ರಾಬಲ್ಯ ಮುರಿಯಲು. ಮತ್ತೊಂದು ಮುಖ್ಯ ಕಾರಣ ಇಮೇಲ್ ಕ್ಷೇತ್ರದಲ್ಲಿ ಮೊದಲನೆಯ ಸ್ಥಾನಕ್ಕೇರಲು.


ಮೈಕ್ರೊಸಾಫ್ಟ್ ವಿಂಡೋಸ್‌ನ ಲೈವ್ ಹಾಟ್‌ಮೇಲ್ ಮತ್ತು ಯಾಹೂ ಕಂಪೆನಿಯ ಯಾಹೂ ಮೇಲ್‌ಗಳು ಇಮೇಲ್ ಕ್ಷೇತ್ರದಲ್ಲಿ ಮೊದಲನೆಯ ಹಾಗೂ ಎರಡನೇ ಸ್ಥಾನದಲ್ಲಿವೆ. ಕಳೆದ ವರ್ಷಾಂತ್ಯಕ್ಕೆ ಜಿಮೇಲ್ 176.5 ದಶಲಕ್ಷ ಗ್ರಾಹಕರನ್ನು ಹೊಂದಿದ್ದರೆ, ಆ ಅವಧಿಯಲ್ಲಿ ಹಾಟ್‌ಮೇಲ್ ಮತ್ತು ಯಾಹೂ ಕ್ರಮವಾಗಿ 369.2 ದಶಲಕ್ಷ ಹಾಗೂ 303.7 ದಶಲಕ್ಷ ಗ್ರಾಹಕರನ್ನು ಹೊಂದುವ ಮೂಲಕ ಇಮೇಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿತ್ತು.

ಹಾಗೆ ನೋಡಿದರೆ ಗೂಗಲ್ ‘ಆರ್ಕುಟ್’ ಸಾಮಾಜಿಕ ಸಂವಹನ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ವೆಬ್ ತಾಣಗಳ ಬಗ್ಗೆ ಮಾಹಿತಿ ನೀಡುವ ಬಳಕೆದಾರ ತಾನೂ ಮಾಹಿತಿ ಸೇರಿಸಬಹುದಾದ ಗೂಗಲ್ ಸೈಡ್‌ವಿಕಿ (Sidewiki) ಕೂಡ ಬಳಕೆಯಲ್ಲಿದೆ.

ಆದರೆ, ಏನು ಮಾಡಿದರೂ, ತನ್ನ ಗ್ರಾಹಕ ಜಿಮೇಲ್ ಚಾಟಿಂಗ್ ಮತ್ತು ಆರ್ಕುಟ್ ಬಳಸುವುದಕ್ಕಿಂತ ಹೆಚ್ಚಾಗಿ ಟ್ವಿಟರ್‌ನಲ್ಲಿ ಹೆಚ್ಚು ಟ್ವೀಟ್ ಮಾಡತೊಡಗಿದಾಗ, ಫೇಸ್‌ಬುಕ್‌ನಲ್ಲಿ ಸಕ್ರಿಯರಾದಾಗ ಗೂಗಲ್ ತಲೆಗೆ ಹೊಳೆದದ್ದೇ ‘ಬಝ್’ ಐಡಿಯಾ. ‘ಬಝ್’ ಬಂದಿರುವುದೇ ಉಳಿದ ಸಾಮಾಜಿಕ ತಾಣಗಳ ಮೇಲೆ ಯುದ್ಧ ಸಾರಲು ಎನ್ನುತ್ತಾರೆ ಪ್ರಮುಖ ತಾಂತ್ರಿಕ ಕನ್ಸಲ್ಟಿಂಗ್ ಕಂಪನಿಯೊಂದರ ವ್ಯವಸ್ಥಾಪಕ ಜೆರ್ಮಿ ವೊವಾಂಗ್.

‘ಬಝ್’ನ ವಿಶೇಷತೆಯೆಂದರೆ ನೀವು ಈಗಾಗಲೇ ಫೇಸ್ ಬುಕ್, ಟ್ವಿಟರ್, ಪಿಕಾಸಾ, ಗೂಗಲ್ ರೀಡರ್, ಯೂಟ್ಯೂಬ್ ಮತ್ತು ಬ್ಲಾಗ್ ಬಳಸುತ್ತಿದ್ದರೆ ಅದರ ಸಂಪರ್ಕವನ್ನು ‘ಬಝ್’ನಲ್ಲಿ ಪಡೆದುಕೊಳ್ಳಬಹುದು. ಉಳಿದ ಸಾಮಾಜಿಕ ವೆಬ್ ತಾಣಗಳಲ್ಲಿ ಈ ಅವಕಾಶ ಇಲ್ಲ ಎನ್ನುವುದು ಬಝ್ ನ ಹಿರಿಮೆ. ಮೊಬೈಲ್‌ನಲ್ಲಿ ಕೂಡ ಬಝ್ ಸಂದೇಶಗಳನ್ನು ಪಡೆಯಲು ಅವಕಾಶವಿದೆ.

ಇಷ್ಟು ಮಾತ್ರವಲ್ಲ ಗೂಗಲ್ ಮ್ಯಾಪ್ ಸಹಾಯದಿಂದ ನಿಮ್ಮ ಹತ್ತಿರವಿರುವ ಸ್ನೇಹಿತರನ್ನೂ ಬಝ್ ನಲ್ಲಿ ಪತ್ತೆ ಹಚ್ಚಬಹುದು.
ಬಝ್ ಬಳಸಿದ ಉಳಿದ ಬಳಕೆದಾರರು ಏನು ಹೇಳುತ್ತಾರೆ ಗೊತ್ತಿಲ್ಲ. ಕನ್ನಡದ ಬಳಕೆದಾರರಂತೂ ಖುಷಿಯಾಗಿದ್ದಾರೆ. ಅವರ ಕೆಲವು ಬಝ್ ಗುಡುವಿಕೆಗಳು ಇಲ್ಲಿವೆ...

‘ನಮ್ಮ ಕ್ಷಣ ಕ್ಷಣದ ಆಲೋಚನೆಗಳು ನಮ್ಮ ತಲೆಯೊಳಗೆ ಇರಬೇಕೋ’? ಗೂಗಲ್ ಸರ್ವರ್‌ನಲ್ಲಿ ಇರಬೇಕೋ?

‘ನಮ್ಮ ಕ್ಷಣ ಕ್ಷಣದ ಆಲೋಚನೆಗಳು ನಮ್ಮ ತಲೆಯೊಳಗೆ ಇರಬೇಕು. ನಮ್ಮ ತಲೆಯ ತುಂಡು ಮಾತ್ರ ಗೂಗಲ್ ಸರ್ವರ್‌ನಲ್ಲಿರಬೇಕು’.

‘ನಮಗೆ ತಲೆ ಇಲ್ಲದಿದ್ದಲ್ಲಿ ಗೂಗಲ್‌ನಲ್ಲೂ, ಪೇಸ್‌ಬುಕ್‌ನಲ್ಲೋ ತಲೆ ಇಟ್ಟು ಯಾವಾಗ ಬೇಕೋ ಆವಾಗ ಟ್ವೀಟ್ ಮಾಡಬೇಕು’.

ಇದು ಏನೇ ಇರಲಿ. ಇತ್ತೀಚೆಗೆ ಯಾಕೋ ಈ ಸಾಮಾಜಿಕ ತಾಣಗಳ ಹಾವಳಿ ಸ್ವಲ್ಪ ಜಾಸ್ತಿ ಆಯಿತು ಅಂತ ಅನಿಸುತ್ತಿದೆ. ನಾಯಿಕೊಡೆಗಳಂತೆ ಹೊಸ ಹೊಸ ತಾಣಗಳು ಹುಟ್ಟಿಕೊಳ್ಳುತ್ತಿವೆ. ಬಳಕೆದಾರರಿಗೇನೂ ಕೊರತೆಯಿಲ್ಲ. ಆದರೆ ಸಾಮಾಜಿಕ ತಾಣಗಳಿಗೆ ಸದಸ್ಯರಾಗುವುದು ಎಂದರೆ ಸಂತೆಯಲ್ಲಿ ಬಟ್ಟೆ ಬಿಚ್ಚಿ ನಿಂತಂತೆ
Share/Save/Bookmark

No comments: